ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಹೊಸಹೊಳಲು ಗ್ರಾಮವು, ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಪಶ್ಚಿಮಕ್ಕೆ, ಭೇರ್ಯ ರಸ್ತೆಯಲ್ಲಿ 3 ಕಿಲೋಮೀಟರ್ ದೂರದಲ್ಲಿ ಇದೆ. ಈ ಗ್ರಾಮದಲ್ಲಿನ ಹೊಯ್ಸಳ ಶೈಲಿಯ ಲಕ್ಷ್ಮೀನಾರಾಯಣ ದೇವಾಲಯವು ಸಾಕಷ್ಟು ಸುಸ್ಥಿತಿಯಲ್ಲಿರುವ ಒಂದು ಭವ್ಯ ಹಾಗೂ ಸುಂದರ ರಚನೆ.
ಈ ದೇವಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಗಳು ದೊರೆತಿಲ್ಲ. ದೇವಾಲಯದ ಗೋಡೆಗಳ ಮೇಲಿನ ಶಿಲ್ಪಗಳನ್ನು ರಚಿಸಿದ ಶಿಲ್ಪಿಗಳ ಹೆಸರೂ ಸಹಾ ಎಲ್ಲೂ ಕಂಡುಬರುವುದಿಲ್ಲ. ಹೀಗಾಗಿ ಈ ದೇವಾಲಯವು ಯಾವಾಗ ನಿರ್ಮಾಣವಾಯಿತೆಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಆದರೆ ಈ ದೇವಾಲಯವು ಕ್ರಿಸ್ತಶಕ 13 ನೇ ಶತಮಾನದಲ್ಲಿ ನಿರ್ಮಾಣಗೊಂಡ ನುಗ್ಗೇಹಳ್ಳಿ, ಅರಳಗುಪ್ಪೆ ಹಾಗೂ ಸೋಮನಾಥಪುರಗಳಲ್ಲಿನ ಹೊಯ್ಸಳದೇವಾಲಯಗಳನ್ನು ಸಂಪೂರ್ಣವಾಗಿ ಹೋಲುವುದರಿಂದ, ಇದರ ನಿರ್ಮಾಣವೂ 13 ನೇ ಶತಮಾನದ ಮಧ್ಯಭಾಗದಲ್ಲಿ ಅಂದರೆ 1240 - 50 ರ ನಡುವೆ ಆಗಿರಬಹುದೆಂದು ತಜ್ಞರು ಊಹಿಸುತ್ತಾರೆ.
ಮೂರು ಗರ್ಭಗುಡಿಗಳನ್ನು ಹೊಂದಿರುವ ಈ
ದೇವಾಲಯವು ಒಂದು ತ್ರಿಕೂಟಾಚಲ. ಈ ದೇವಾಲಯದ ಪ್ರಧಾನ
ದೇವತೆ ನಾರಾಯಣನಾದರೂ ಇದು ಲಕ್ಷ್ಮೀನಾರಾಯಣ ದೇವಾಲಯವೆಂದೇ ಪ್ರಸಿದ್ಧವಾಗಿದೆ. ದೇವಾಲಯದ
ಪ್ರಧಾನ ಗರ್ಭಗುಡಿ ಪೂರ್ವಾಭಿಮುಖವಾಗಿದೆ. ಇದರ ಜೊತೆಗೆ ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲೂ ಒಂದೊಂದು
ಗರ್ಭಗುಡಿ ಇದ್ದು, ಅಲ್ಲಿ ಕ್ರಮವಾಗಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹರ ವಿಗ್ರಹಗಳಿವೆ. ದಕ್ಷಿಣ ಗರ್ಭಗುಡಿಯಲ್ಲಿನ ವೇಣುಗೋಪಾಲನ ವಿಗ್ರಹ ಇತ್ತೀಚಿನದು (1953). ಈ ದೇವಾಲಯ ನಿರ್ಮಾಣವಾದಾಗ
ದಕ್ಷಿಣದ ಗರ್ಭಗುಡಿಯಲ್ಲಿ ವೇಣುಗೋಪಾಲನ ವಿಗ್ರಹ ಪ್ರತಿಷ್ಠಾಪನೆಯಾಗಿತ್ತೆಂದೊ; ನಂತರದಲ್ಲಿ
ಯಾವಾಗಲೋ ಆ ವಿಗ್ರಹವನ್ನು ಕನ್ನಂಬಾಡಿಗೆ ಸಾಗಿಸಲಾಯಿತೆಂದೂ ತಿಳಿದುಬಂದಿದೆ. ಹಾಗಾಗಿ, ಖಾಲಿ ಇದ್ದ
ಈ ಗರ್ಭಗುಡಿಯಲ್ಲಿ ಮತ್ತೊಂದು ವೇಣುಗೋಪಾಲನ ವಿಗ್ರಹವನ್ನು ಸ್ಥಾಪಿಸಲಾಗಿದೆ. ದಕ್ಷಿಣದ ಈ ಗರ್ಭಗುಡಿಯಲ್ಲಿ
ಲೋಹದ ಕೆಲವು ದೇವೀ
ಉತ್ಸವಮೂರ್ತಿಗಳನ್ನೂ ಇಡಲಾಗಿದೆ.
ಲಕ್ಷ್ಮೀನಾರಾಯಣ ದೇವಾಲಯವು ಕೆಲವು ಶತಮಾನಗಳ ಕಾಲ ತನ್ನ ಮೂಲರೂಪವನ್ನೇ ಹೊಂದಿತ್ತು.
ಆದರೆ ನಂತರದಲ್ಲಿ ಯಾವಾಗಲೋ ಕಣಶಿಲೆಯ ( granite
), ಹನ್ನೆರಡು ಅಂಕಣದ ಮಂಟಪವೊಂದನ್ನು ಸೇರಿಸಿ, ದೇವಾಲಯಕ್ಕೆ ಈಗಿನ ರೂಪ ಕೊಡಲಾಗಿದೆ. ದೇವಾಲಯಕ್ಕೆ
ಒಂದು ಪ್ರಾಕಾರದ ಗೋಡೆಯೂ ಇದ್ದಿತೆಂದು ತಿಳಿದು ಬಂದಿದ್ದು,
ಅದು ಈಗ ಅದೃಶ್ಯವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು, ನಾಲ್ಕೂವರೆ ಅಡಿ ಎತ್ತರದ ಜಗತಿಯ
ಮೇಲೆ ನಿಂತಿದೆ. ನಕ್ಷತ್ರಾಕಾರವನ್ನು ಹೊಂದಿ, ದೇವಾಲಯವನ್ನು ಸಂಪೂರ್ಣ ಸುತ್ತುವರೆಯುವ ಈ ಜಗತಿಯು
ದೇವಾಲಯದ ಪ್ರದಕ್ಷಿಣಪಥವೂ
ಆಗಿದೆ. ಜಗತಿಗೆ ಆಧಾರವಾಗಿ ಹಿಂದೆ, ಪ್ರತಿಮೂಲೆಯಲ್ಲಿಯೂ ಒಂದು ಆನೆ ಇದ್ದಿತೆಂದು ಹೇಳುತ್ತಾರೆ. ಆದರೆ
ಈಗ ಕೇವಲ ಐದು ಆನೆಗಳು ಮಾತ್ರ ಕಂಡುಬರುತ್ತವೆ.
ಲಕ್ಷ್ಮೀನಾರಾಯಣ ದೇವಾಲಯವು ಕೆಲವು ಶತಮಾನಗಳ ಕಾಲ ತನ್ನ ಮೂಲರೂಪವನ್ನೇ ಹೊಂದಿತ್ತು. ಆದರೆ ನಂತರದಲ್ಲಿ ಯಾವಾಗಲೋ ಕಣಶಿಲೆಯ ( granite ), ಹನ್ನೆರಡು ಅಂಕಣದ ಮಂಟಪವೊಂದನ್ನು ಸೇರಿಸಿ, ದೇವಾಲಯಕ್ಕೆ ಈಗಿನ ರೂಪ ಕೊಡಲಾಗಿದೆ. ದೇವಾಲಯಕ್ಕೆ ಒಂದು ಪ್ರಾಕಾರದ ಗೋಡೆಯೂ ಇದ್ದಿತೆಂದು ತಿಳಿದು ಬಂದಿದ್ದು, ಅದು ಈಗ ಅದೃಶ್ಯವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು, ನಾಲ್ಕೂವರೆ ಅಡಿ ಎತ್ತರದ ಜಗತಿಯ ಮೇಲೆ ನಿಂತಿದೆ. ನಕ್ಷತ್ರಾಕಾರವನ್ನು ಹೊಂದಿ, ದೇವಾಲಯವನ್ನು ಸಂಪೂರ್ಣ ಸುತ್ತುವರೆಯುವ ಈ ಜಗತಿಯು ದೇವಾಲಯದ ಪ್ರದಕ್ಷಿಣಪಥವೂ ಆಗಿದೆ. ಜಗತಿಗೆ ಆಧಾರವಾಗಿ ಹಿಂದೆ, ಪ್ರತಿಮೂಲೆಯಲ್ಲಿಯೂ ಒಂದು ಆನೆ ಇದ್ದಿತೆಂದು ಹೇಳುತ್ತಾರೆ. ಆದರೆ ಈಗ ಕೇವಲ ಐದು ಆನೆಗಳು ಮಾತ್ರ ಕಂಡುಬರುತ್ತವೆ.
ದೇವಾಲಯದ ಅಧಿಷ್ಠಾನ ಆರು ಪಟ್ಟಿಕೆಗಳನ್ನು ಹೊಂದಿದೆ. ದೇವಾಲಯವನ್ನು ಸುತ್ತುವರೆದಿರುವ ಈ ಪಟ್ಟಿಕೆಗಳಲ್ಲಿ ಕೆಳಗಿನಿಂದ ಮೇಲಕ್ಕೆ, ಕ್ರಮವಾಗಿ ಆನೆಗಳು, ಅಶ್ವದಳ, ಲತೆಗಳು, ಪೌರಾಣಿಕ ಶಿಲ್ಪಗಳು, ಮಕರಗಳು ಮತ್ತು ಹಂಸಗಳನ್ನು ಚಿತ್ರಿಸಲಾಗಿದೆ. ಈ ಪಟ್ಟಿಕೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪೌರಾಣಿಕ ಪಟ್ಟಿಕೆ. ಈ ಪಟ್ಟಿಕೆಯ ಆಗ್ನೇಯ ಭಾಗದಲ್ಲಿ ಸಮುದ್ರಮಥನ, ದಕ್ಷಿಣ ಭಾಗದಲ್ಲಿ ರಾಮಾಯಣ, ಮತ್ತು ಪಶ್ಚಿಮ ಭಾಗದಲ್ಲಿ ಮಹಾಭಾರತದ ಕೆಲವು ಪ್ರಸಂಗಗಳನ್ನು ಚಿತ್ರಿಸಲಾಗಿದೆ. ದೇವಾಲಯದ ಕಟಾಂಜನದ ಮೇಲ್ಭಾಗದಲ್ಲಿ ಭಾಗವತದ ಕೆಲವು ಪ್ರಸಂಗಗಳನ್ನೂ ಮತ್ತು ಇತರ ವಿಷಯಗಳನ್ನೂ ಚಿತ್ರಿಸಲಾಗಿದೆ. ಈ ಶಿಲ್ಪಗಳು ಬಹಳಷ್ಟು ಮುಕ್ಕಾಗಿರುವುದರಿಂದ ಇವುಗಳನ್ನು ಗುರುತಿಸುವುದು ಕಷ್ಟ. ದೇವಾಲಯದ ಪೂರ್ವ ಗೋಡೆಯ ಮೇಲೆ ಯಕ್ಷ - ಯಕ್ಷಿಣಿಯರು, ಉಪಗೋಪುರಗಳು (turrets), ಸಿಂಹಗಳು, ಸಳ - ಸಿಂಹ ವಿಗ್ರಹಗಳು ಕಂಡುಬರುತ್ತವೆ. ಕಟಾಂಜನದ ಮೇಲೆ ಮೂರು ಅಂಗುಲ ಅಗಲದ ಲತಾ ಪಟ್ಟಿಕೆ ಇದೆ. ಕಟಾಂಜನದ ಮೇಲೆ ಗೋಡೆಗಳಲ್ಲಿ ಜಾಲಂದ್ರಗಳಿವೆ. ಇದರ ಮೇಲೆ ಮೇಲ್ಚಾವಣಿಯ ಬೋದಿಗೆ ಕೀರ್ತಿಮುಖಗಳಿಂದ ಅಲಂಕೃತವಾಗಿದೆ.
ದೇವಾಲಯದ ಹೊರಭಿತ್ತಿಯಲ್ಲಿ, ಅಧಿಷ್ಠಾನದ ಮೇಲ್ಭಾಗದಲ್ಲಿ ಪೀಠ - ತೋರಣಗಳ ಮಧ್ಯದಲ್ಲಿ ಎರಡೂವರೆ ಅಡಿ ಎತ್ತರದ ಅತ್ಯಂತ ಸುಂದರ ಹಾಗೂ ಪ್ರಮಾಣಬದ್ಧ ದೇವತಾ ವಿಗ್ರಹಗಳಿವೆ. ಈ ವಿಗ್ರಹಗಳ ಪೀಠಗಳ ಮೇಲೆ ಲತಾ ಪಟ್ಟಿಕೆ, ಸಿಂಹ ಮುಖ ಮತ್ತು ಗರುಡಗಳನ್ನು ಕಾಣಬಹುದು. ದೇವಾಲಯವನ್ನು ಸುತ್ತುವರೆದಿರುವ ಈ ದೊಡ್ಡ ವಿಗ್ರಹಗಳ ಭಾಗವು ಪೀಠ ಹಾಗೂ ತೋರಣಗಳನ್ನು ಸೇರಿ ಸುಮಾರು ನಾಲ್ಕು ಅಡಿ ಎತ್ತರ ಬರುತ್ತದೆ. ಲಕ್ಷ್ಮೀನಾರಾಯಣ ದೇವಾಲಯವು ಒಂದು ವಿಷ್ಣು ದೇವಾಲಯವಾದುದರಿಂದ, ಹೊರಬಿತ್ತಿಯಲ್ಲಿನ ಮೂರ್ತಿಗಳೆಲ್ಲವೂ ವೈಷ್ಣವ ವಿಗ್ರಹಗಳೇ ಆಗಿವೆ. ದೇವಾಲಯದ ಸುತ್ತ ಒಟ್ಟು 60 ದೊಡ್ಡ ವಿಗ್ರಹಗಳಿದ್ದು ಪ್ರತಿ ವಿಗ್ರಹವೂ ಒಂದು ಚೌಕಟ್ಟಿನ ಮಧ್ಯದಲ್ಲಿ ಇದೆ, ಮತ್ತು ಅದರ ಅಕ್ಕ- ಪಕ್ಕಗಳಲ್ಲಿ ಆ ದೇವತೆಯ ಸಂಗಾತಿ ಹಾಗೂ ಪರಿಚಾರಕರ ವಿಗ್ರಹಗಳಿವೆ. ಈ ದೇವತಾ ಮೂರ್ತಿಗಳಲ್ಲಿ ಚತುರ್ವಿಂಶತಿ ಮೂರ್ತಿಗಳನ್ನೂ, ( ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳು ) ಸರಸ್ವತೀ , ಪಾರ್ವತೀ ಮುಂತಾದ ಸ್ತ್ರೀ ವಿಗ್ರಹಗಳನ್ನೂ, ಗಣೇಶ, ಲಕ್ಷ್ಮೀ ಮುಂತಾದ ದೇವತೆಗಳ ನಾಟ್ಯಭಂಗಿಯನ್ನೂ ಮತ್ತು ಕೃಷ್ಣನ ವಿವಿಧ ರೂಪಗಳನ್ನೂ ಕಾಣಬಹುದು.
ದೊಡ್ಡ ವಿಗ್ರಹಗಳ ಮೇಲೆ ಕೀರ್ತಿ ಮುಖಗಳ ಸಾಲಿರುವ ಕಾರ್ನೀಸು ಇದೆ. ಇದರ ಮೇಲೆ ಮೇಲ್ಚಾವಣಿ ಮತ್ತು ಕೈಪಿಡಿಗೋಡೆಗಳಿವೆ. ಕೈಪಿಡಿ ಗೋಡೆಯ ಮೇಲೆ ಕೀರ್ತಿಮುಖ, ಯಕ್ಷ - ಯಕ್ಷಿಣಿ, ಹಾಗೂ ಉಪಗೋಪುರಗಳ ಸಾಲು ಇದೆ.
ಪ್ರಧಾನ ಗರ್ಭಗುಡಿಯ ಮೇಲಿರುವ ಶಿಖರ ಟೊಳ್ಳಾಗಿದ್ದು, ಹದಿನಾರು ಕೋನಗಳನ್ನು ಹೊಂದಿದೆ. ಈ ಶಿಖರವು ಶುಕನಾಸಿಯ ಮೇಲೆ ಸ್ವಲ್ಪ ಚಾಚಿದೆ. ಶಿಖರದಲ್ಲಿ ಅನೇಕ ಸುಂದರ ವಿಗ್ರಹಗಳಿವೆ.
ದೇವಾಲಯದ ನವರಂಗ ಸುಂದರವಾಗಿದ್ದು ಒಂಬತ್ತು ಅಂಕಣಗಳನ್ನು ಹೊಂದಿದೆ. ದೇವಾಲಯದ ಪೂರ್ವದ್ವಾರದ ಬಳಿಯೂ ಒಂದು ಅಂಕಣವಿದ್ದು, ಒಟ್ಟು ಹತ್ತು ಅಂಕಣಗಳು ನವರಂಗದ ಭಾಗದಲ್ಲಿದೆ. ಪ್ರತಿ ಅಂಕಣದಲ್ಲಿಯೂ ಒಂದು ಭುವನೇಶ್ವರಿ ಇರುವುದರಿಂದ ಒಟ್ಟು ಹತ್ತು ಭುವನೇಶ್ವರಿಗಳಿವೆ. ಪ್ರತಿ ಭುವನೇಶ್ವರಿಯೂ ತನ್ನದೇ ಆದ ರೂಪವನ್ನು ಹೊಂದಿದೆ , ಪ್ರತಿ ಭುವನೇಶ್ವರಿಯಲ್ಲಿಯೂ ಬೇರೆಯದೇ ಆದ ರೇಖಾ ಚಿತ್ರಗಳ ರಚನೆಗಳಿವೆ.
ದೇವಾಲಯದ ಮುಖಮಂಟಪದ ಕಾಲ ಸರಿಯಾಗಿ ತಿಳಿದುಬಂದಿಲ್ಲ. ಆದರೆ ಅದು ದೇವಾಲಯ ನಿರ್ಮಾಣವಾದ ಹಲವಾರು ವರ್ಷಗಳ ನಂತರ ಸೇರ್ಪಡೆಯಾದದ್ದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮುಖ ಮಂಟಪದ ದ್ವಾರದಲ್ಲಿ ಕಲ್ಲಿನ ಜಗಲಿ ಇದೆ. ನವರಂಗದ ಪಶ್ಚಿಮ ಗೋಡೆಯಲ್ಲಿ ಎರಡು ಮಂಟಪಗಳಿದ್ದು, ಸುಂದರವಾದ ಶಿಖರಗಳನ್ನು ಹೊಂದಿವೆ. ಈ ಮಂಟಪಗಳಲ್ಲಿ ಗಣಪತಿ ಮತ್ತು ಮಹಿಷಾಸುರಮರ್ದಿನಿಯ ವಿಗ್ರಹಗಳಿವೆ. ನವರಂಗ ಮತ್ತು ಮುಖಮಂಟಪದೊಳಗೆ ದುಂಡಾದ ಮತ್ತು ಹದಿನಾರು ಕೋನಗಳಿರುವ ಸ್ತಂಭಗಳಿವೆ. ಈ ಸ್ತಂಭಗಳ ಮೇಲ್ಭಾಗದಲ್ಲಿ ನೃತ್ಯ ಮಾಡುತ್ತಿರುವ ಸ್ತ್ರೀ ವಿಗ್ರಹಗಳಿವೆ.
ಹೊಯ್ಸಳ ದೇವಾಲಯಗಳ ಬಹುತೇಕ ಗುಣಲಕ್ಷಣಗಳನ್ನು ಹೊಂದಿದ್ದು ಸಾಕಷ್ಟು ಸುಸ್ಥಿತಿಯಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯವು ನೋಡಲೇಬೇಕಾದ ಒಂದು ದೇವಾಲಯ.
ದೇವಾಲಯದ ವಿವರಗಳು
ಲಕ್ಷ್ಮೀನಾರಾಯಣ ದೇವಾಲಯವನ್ನು ವಿವರವಾಗಿ ನೋಡಬಯಸುವವರು ಅದನ್ನು ಈ ಕೆಳಗೆ ಹೆಸರಿಸಿರುವಂತೆ ಏಳು ಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು ಸೂಕ್ತ:
I ಅಧಿಷ್ಠಾನ
II ದೊಡ್ಡ ವಿಗ್ರಹಗಳು
III ಮೇಲ್ಚಾವಣಿ ಮತ್ತು ಕೈಪಿಡಿ ಗೋಡೆ
IV ಶಿಖರ ಅಥವಾ ವಿಮಾನ
V ಮುಖ ಮಂಟಪ
VI ನವರಂಗ ಮತ್ತು ಶುಕನಾಸಿ
VII ಗರ್ಭಗುಡಿಗಳು
I.ಅಧಿಷ್ಠಾನ ( Basement )
ಅಧಿಷ್ಠಾನವನ್ನು ಆರು ಪಟ್ಟಿಕೆಗಳಾಗಿ ವಿಭಜಿಸಲಾಗಿದೆ. ಈ ಪಟ್ಟಿಕೆಗಳು ದೇವಾಲಯದ ಹೊರಭಿತ್ತಿಯನ್ನು ಸುತ್ತುವರೆದಿವೆ. ಅಧಿಷ್ಠಾನದ ಕೆಳಭಾಗದಿಂದ ಮೇಲಕ್ಕೆ ಹೋದಂತೆ ಕ್ರಮವಾಗಿ ಆನೆಗಳ ಸಾಲು, ಅಶ್ವದಳದ ಸಾಲು, ಲತಾ ಪಟ್ಟಿಕೆ, ಪೌರಾಣಿಕ ಪಟ್ಟಿಕೆ, ಮಕರ ಸಾಲು, ಹಂಸಗಳ ಸಾಲುಗಳನ್ನು ಕಾಣಬಹುದು. ಈ ಒಂದೊಂದು ಸಾಲು ಸಹಾ ದೇವಾಲಯದ ಹೊರ ಭಿತ್ತಿಯನ್ನು ಸುತ್ತುವರೆದಿದೆ. ಇದಲ್ಲದೇ ಪೂರ್ವದ ಗೋಡೆಯಲ್ಲಿ ಯಕ್ಷ - ಯಕ್ಷಿಣಿಯರು, ಗೋಪುರಗಳು ಮತ್ತು ಸಿಂಹಗಳನ್ನು ಚಿತ್ರಿಸಲಾಗಿದೆ.
ಆನೆಗಳ ಸಾಲಿನಲ್ಲಿ ಅಲ್ಲೊಂದು - ಇಲ್ಲೊಂದು ಕಡೆ ಆನೆಯೊಂದರೊಡನೆ ಸೆಣಸುತ್ತಿರುವ ವ್ಯಕ್ತಿಯೊಬ್ಬನನ್ನು ಗಮನಿಸಬಹುದು. ಅಂತೆಯೇ ಕೆಲವು ಯಕ್ಷರ ಚಿತ್ರಗಳನ್ನು ಸಹಾ
ಗಮನಿಸಬಹುದು.
ಅಶ್ವದಳದ ಸಾಲಿನಲ್ಲಿರುವ ಅಶ್ವಗಳ ಸಂಖ್ಯೆ ಸೋಮನಾಥಪುರದ ದೇವಾಲಯದಲ್ಲಿರುವುದಕ್ಕಿಂತಲೂ ಅಧಿಕವಾಗಿರುವುದು ಈ ಪಟ್ಟಿಕೆಯ ವಿಶೇಷ. ಕುದುರೆಗಳು ಅಂಗರಕ್ಷೆಗಳನ್ನು ಹೊಂದಿವೆ. ಕೆಲವು ಕುದುರೆಗಳು ಅನಾಯಾಸದಿಂದ ನಾಗಾಲೋಟದಲ್ಲಿರುವಂತೆ ಕಾಣುತ್ತದೆ.
ಲತಾ ಪಟ್ಟಿಕೆಯಲ್ಲಿ ಅಂತಹ ವಿಶೇಷವೇನೂ ಇಲ್ಲದಿದ್ದರೂ, ಶಿಲ್ಪಿಯ ಚಾತುರ್ಯ ಎದ್ದು ಕಾಣುತ್ತದೆ. ಪೌರಾಣಿಕ ಪಟ್ಟಿಕೆಯ ಮೇಲೆ ಮಕರಗಳನ್ನೂ, ಅದರ ಮೇಲೆ ಹಂಸಗಳನ್ನೂ ಮತ್ತು ಮೂಲೆಗಳಲ್ಲಿ ಸಿಂಹಗಳನ್ನೂ ಕಾಣಬಹುದು.
ಅಧಿಷ್ಠಾನದ ಅತಿ ಮುಖ್ಯ ಪಟ್ಟಿಕೆಯೆಂದರೆ ಪೌರಾಣಿಕ ಪಟ್ಟಿಕೆ. ಹಿಂದೆಯೇ ತಿಳಿಸಿರುವಂತೆ ಈ ಪಟ್ಟಿಕೆಯ ಆಗ್ನೇಯದ ಭಾಗದಲ್ಲಿ (Southeast) ಸಮುದ್ರಮಥನ, ದಕ್ಷಿಣದಲ್ಲಿ ರಾಮಾಯಣ, ಪಶ್ಚಿಮದಲ್ಲಿ ಮಹಾಭಾರತ ಹಾಗೂ ಈಶಾನ್ಯದಲ್ಲಿ ಭಾಗವತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕಾಣಬಹುದು.
ಪೌರಾಣಿಕ ಪಟ್ಟಿಕೆಗಳ ವಿವರಗಳು
ದೇವಾಲಯದ ಹೊರಭಿತ್ತಿಯು ಹತ್ತೊಂಬತ್ತು ಮುಖಗಳನ್ನು ಹೊಂದಿದೆ ಮತ್ತು ಈ ಹತ್ತೊಂಬತ್ತು ಮುಖಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ದೇವಾಲಯದ ಆಗ್ನೇಯದಿಂದ (southeast) ಪ್ರಾರಂಭಿಸಿ ಪ್ರದಕ್ಷಿಣಾಕಾರವಾಗಿ ಮುಂದುವರೆದರೆ ಕಂಡುಬರುವ ಶಿಲ್ಪಗಳು ಇಂತಿವೆ :
ಒಂದನೆಯ ಮುಖ :
೧ | ರಾಕ್ಷಸರೊಡನೆ ಹೋರಾಡುತ್ತಿರುವ ವರಾಹ. |
೨ | ದೇವತೆಗಳೊಂದಿಗೆ ಗರುಡನ ಯುದ್ಧ. |
೩ | ಅಮೃತಕಳಶವನ್ನು ತರುತ್ತಿರುವ ಗರುಡ. |
೪ | ಸಮುದ್ರ ಮಥನವನ್ನು ವೀಕ್ಷಿಸಲು ಹೊರಟಿರುವ ಅಷ್ಟ ದಿಕ್ಪಾಲಕರು. |
ಮೂರನೆಯ ಮುಖ :
೧ | ಪ್ರಹ್ಲಾದನನ್ನು ಹಿಂಸೆಗೀಡು ಮಾಡಿರುವ ಹಿರಣ್ಯಕಶಿಪು. |
೨ ಮತ್ತು ೨ (ಅ) | ಆನೆಗಳು, ಸರ್ಪಗಳು,ಬೆಂಕಿ ಮತ್ತು ಪಿಶಾಚಿಗಳಿಂದ ಹಿಂಸೆಗೆ ಒಳಪಟ್ಟಿರುವ ಪ್ರಹ್ಲಾದ ಬೆಂಕಿಯ ನಡುವೆ ಮತ್ತು ಸಮುದ್ರಕ್ಕೆ ಎಸೆಯಲ್ಪಟ್ಟಿರುವ, ಆದರೂ ತನ್ನ ನಂಬಿಕೆಯನ್ನು ಬಿಡದಿರುವ ಪ್ರಹ್ಲಾದನಿಗೆ ತನ್ನ ವಿಶ್ವರೂಪದರ್ಶನದ ಮೂಲಕ ಅಭಯ ನೀಡುತ್ತಿರುವ ವಿಷ್ಣು. |
ನಾಲ್ಕನೆಯ ಮುಖ :
೧ | ಉಗ್ರನರಸಿಂಹನಿಂದ ಹಿರಣ್ಯಕಶಿಪುವಿನ ಸಂಹಾರ |
೨ | ತ್ರಿಪುರ ಸಂಹಾರಕ್ಕಾಗಿ ಹೊರಟಿರುವ ದೇವಸೇನೆಯ ಮುಂದಾಳತ್ವ ವಹಿಸಿರುವ ಕುಮಾರ ಸ್ವಾಮಿ. |
೩ | ರಾಕ್ಷಸರೊಡನೆ ಕಾದಾಡುತ್ತಿರುವ ಶಿವಗಣಗಳು (ಇದು ಅಂಧಕಾಸುರನಿಗೆ ಸಂಬಂಧಿಸಿದ ಕಥೆ ಇರಬಹುದೆಂದು ಕೆಲವರು ಊಹಿಸಿದ್ದಾರೆ) |
೪ | ಗಜಾಸುರಮರ್ದನ |
ಐದನೆಯ ಮುಖದಿಂದ ಪ್ರಾರಂಭಿಸಿ ಹನ್ನೊಂದನೆಯ ಮುಖದವರೆಗೆ ರಾಮಾಯಣಕ್ಕೆ ಸಂಬಂಧಿಸಿದ ಶಿಲ್ಪಗಳು
ಐದನೆಯ ಮುಖ :
೧ | ದಶರಥ ಮತ್ತು ಅವನ ರಾಣಿಯರು. |
೨ | ದಶರಥನಿಂದ ಪುತ್ರಕಾಮೇಷ್ಠಿಯಾಗ. |
೩ | ಅಹಲ್ಯಾ ಶಾಪವಿಮೋಚನ ( ಕೆಲವರು ಇದನ್ನು ಸೀತೆಯ ಜನನವಿರಬಹುದೆಂದು ಹೇಳುತ್ತಾರೆ). |
೪ | ಜನಕನ ಆಸ್ಥಾನಕ್ಕೆ ಹೋಗುತ್ತಿರುವ ರಾಮ – ಲಕ್ಷ್ಮಣರು (ಚಿತ್ರದಲ್ಲಿ ಕಾಣುವುದಿಲ್ಲ). |
೫ | ಸೀತಾ ಕಲ್ಯಾಣ (ಚಿತ್ರದಲ್ಲಿ ಕಾಣುವುದಿಲ್ಲ). |
೬ | ಪರಶುರಾಮನ ಗರ್ವಭಂಗ (ಚಿತ್ರದಲ್ಲಿ ಕಾಣುವುದಿಲ್ಲ). |
ಆರನೆಯ ಮುಖ :
೧ | ರಾಮನನ್ನು ಯುವರಾಜನನ್ನಾಗಿ ಮಾಡುವ ಪ್ರಯತ್ನ. |
೨ | ಅರಣ್ಯದತ್ತ ಹೊರಟಿರುವ ರಾಮ, ಲಕ್ಷ್ಮಣ, ಸೀತೆ. |
೩ | ಕಬಂಧ, ಖರದೂಷಣ ಮತ್ತು ಅವನ ಸಹೋದರರ ಸಂಹಾರ. |
೪ | ಶೂರ್ಪನಖಿಯ ನಾಸಿಕಾಛೇದ. |
೫ | ಸುವರ್ಣಮೃಗವನ್ನು ಬೆನ್ನಟ್ಟಿ ಕೊಂದಿರುವ ರಾಮ. |
ಎಂಟನೆಯ ಮುಖ :
೧ | ರಾಮನಿಂದ ರಾಕ್ಷಸನೊಬ್ಬನ ಹತ್ಯೆ. |
೨ | ರಾಮ - ಹನುಮಂತರ ಸಮಾಗಮ. |
೩ | ವಾಲಿ - ಸುಗ್ರೀವರ ಕದನ. |
೪ | ಸಪ್ತತಾಳ ಛೇದನದ ನಂತರ ವಾಲಿ ಸಂಹಾರ. |
೫ | ಸುಗ್ರೀವನ ಪಟ್ಟಾಭಿಷೇಕ. |
೬ | ರಾಮನಿಂದ ಮುದ್ರಿಕೆಯನ್ನು ಪಡೆಯುತ್ತಿರುವ ಹನುಮಂತ. |
೭ | ಸ್ಪಯಂಪ್ರಭೆಯ ಗುಹೆಯಿಂದ ಕಪಿಗಳನ್ನು ಬಿಡಿಸಿ,ಸಮುದ್ರವನ್ನು ಸೇರುತ್ತಿರುವ ಹನುಮಂತ. |
೮ | ಹನುಮಂತನಿಂದ ಸಮುದ್ರಲಂಘನ. |
ಒಂಬತ್ತನೆಯ ಮುಖ:
೧ | ಲಂಕಿಣಿಯನ್ನು ಸೋಲಿಸಿರುವ ಹನುಮಂತ. |
೨ | ಸೀತೆಯ ಭೇಟಿಮಾಡಿರುವ ಹನುಮಂತ. |
೩ | ರಾಕ್ಷಸರೊಡನೆ ಯುದ್ಧ. |
೪ | ಇಂದ್ರಜಿತನಿಗೆ ಸೆರೆಯಾಗಿರುವ ಹನುಮಂತ. |
೫ | ರಾವಣನೊಡೆನೆ ವಾದ ಮಾಡುತ್ತಿರುವ ಹನುಮಂತ. |
೬ | ಲಂಕಾದಹನ. |
೭ | ಸೇತುಬಂಧನ (bridging the ocean). |
೮ | ಯುದ್ಧಾರಂಭ. |
ಹತ್ತನೆಯ ಮುಖ :
೧ | ಯುದ್ಧಕ್ಕೆ ಅಣಿಯಾದ ರಾವಣನ ಸೈನ್ಯ. |
೨ | ಮೂರ್ಛೆಹೋಗಿರುವ ಲಕ್ಷ್ಮಣ. |
೩ | ಸಂಜೀವನ ಪರ್ವತವನ್ನು ತಂದಿರುವ ಹನುಮಂತ. |
೪ | ಯುದ್ಧವನ್ನು ಮುಂದುವರೆಸಿರುವ ಲಕ್ಷ್ಮಣ. |
೫ | ಇಂದ್ರಜಿತನಿಂದ ಯಜ್ಞ. |
೬ | ಲಕ್ಷ್ಮಣನಿಂದ ಇಂದ್ರಜಿತನ ಸಂಹಾರ. |
೭ | ರಾಮ - ರಾವಣರ ಯುದ್ಧ. |
೮ | ರಾವಣನ ಸಂಹಾರ. |
No comments:
Post a Comment